ಕೃತಿಚೌರ್ಯ	

ಒಬ್ಬನ ಬರೆಹವನ್ನು ಪೂರ್ಣವಾಗಿಯೋ ಅಥವಾ ಭಾಗಶಃವಾಗಿಯೋ ಕದ್ದು ತನ್ನದೆಂದು ಹೇಳಿಕೊಳ್ಳುವುದು ಇಲ್ಲವೆ ಇತರರದೆಂದು ಸಿದ್ಧಿಸಲು ಹೊರಡುವುದು ಕೃತಿಚೌರ್ಯವೆನಿಸುತ್ತದೆ(ಫೋರ್ಜರಿ), ಮನುಷ್ಯ ಪ್ರಪಂಚದಲ್ಲಿ ಕಳ್ಳತನ ಹೇಗೆ ನಡೆದು ಬಂದಿದೆಯೋ ಹಾಗೆಯೇ ಸಾಹಿತ್ಯ ಪ್ರಪಂಚದಲ್ಲೂ ಅದರ ಹಾವಳಿ ಇದ್ದೇ ಇದೆ. ಪ್ರಾಮಾಣಿಕತೆಗೆ ಒಂದೇ ದಾರಿ. ಅಪ್ರಾಮಾಣಿಕತೆಗೆ ಹಲವು. ಸಾಹಿತ್ಯಕ್ಷೇತ್ರದಲ್ಲಿ ಕಂಡುಬರುವ ಮೋಸಕೃತ್ಯಗಳನ್ನು ಇಲ್ಲಿ ಪರಿಶೀಲಿಸಿದೆ. ಗಾಢಾನುಭವ, ಧೀಃಶಕ್ತಿ, ಭಾಷಾಶೈಲಿ, ಮೊದಲಾದ ಹಿರಿಯ ಗುಣಗಳನ್ನುಳ್ಳ ಕವಿಯೊಬ್ಬನ ಖ್ಯಾತಿಯನ್ನು ಕಂಡು ಅಸೂಯೆಗೊಂಡ ಜನ ಯಾವನೋ ಅದಕ್ಷ ಸಾಹಿತಿಯಿಂದ ರಚಿತವಾದ ಕೃತಿಗಳನ್ನು ಕಾಲ್ಪನಿಕ ಕವಿಯೊಬ್ಬನ ಹೆಸರಿನಲ್ಲಿ ಪ್ರಕಟಿಸಿ ಅವನಿಗೂ ಹೆಸರಾಂತ ನಿಜದ ಕವಿಗೂ ಪೈಪೋಟಿಯನ್ನು ಏರ್ಪಡಿಸಲು ಯತ್ನಿಸಬಹುದು. ಬಹಳ ಹಿಂದೆ ಹೋಮರನಿಗೆ ಎದುರಾಗಿ ಹರ್ಮಿಸ್ ಟ್ರಿಸ್ಮೆಜಿಸ್ಟಸ್ ಎಂಬ ಸುಳ್ಳು ವ್ಯಕ್ತಿಯನ್ನು ನಿರ್ಮಿಸಿದ್ದುಂಟು. ಇದರಿಂದ ಕೆಲವು ಕಾಲ ಪಂಡಿತರಲ್ಲಿ ಸಂಶಯ ಸ್ಥಿತಿ ಏರ್ಪಟ್ಟಿತೇ ಹೊರತು ಹೋಮರನ ಕೀರ್ತಿಗೆ ಧಕ್ಕೆ ತಗಲಲಿಲ್ಲ.
ಇಂಥ ಫೋರ್ಜರಿಗೆ ಅಸೂಯೆ, ಮತ್ಸರ, ಮುಂತಾದ ದುರ್ಭಾವನೆಯೇ ಇರಬೇಕಾದ್ದಿಲ್ಲ. ಯಾವುದೋ ಒಂದು ಬಗೆಯ ಕೋಪದಿಂದಲೋ ಅಥವಾ ನಿಷ್ಕಾರಣವಾಗಿಯೋ ಚಾಪಲ್ಯಕ್ಕೊಳಗಾಗಿ ಕೃತಿಚೌರ್ಯಕ್ಕೆ ಪ್ರಯತ್ನ ನಡೆಸಬಹುದು. 250 ವರ್ಷಕ್ಕೂ ಮೇಲ್ಪಟ್ಟು, ಷೇಕ್ಸ್‍ಪಿಯರ್ ಕಟ್ಟಿದವೆಂದೇ ಗೊತ್ತಾಗಿದ್ದ ನಾಟಕ ಚಕ್ರವನ್ನು ಫ್ರಾನ್ಸಿಸ್ ಬೇಕನ್ ಬರೆದನೆಂಬ ವಾದವೊಂದು 19ನೆಯ ಶತಮಾನದ ಎರಡನೆಯ ಭಾಗದಲ್ಲಿ ಎದ್ದು ಬಂತು. ಅದರ ವೈಪರೀತ್ಯ ಎಷ್ಟರ ತನಕ ಹೋಯಿತೆಂದರೆ ಅವುಗಳ ಕರ್ತೃ ಬೇಕನ್ ಅಲ್ಲ ಮತೊಬ್ಬ. ಅವನಲ್ಲ ಮತ್ತೊಬ್ಬ-ಎಂಬುದಾಗಿ ಅನೇಕರಿಗೆ ಆ ಪಟ್ಟವನ್ನು ಕಟ್ಟುತ್ತ ಹೋದರು. ಈ ಹಗರಣ ಏತಕ್ಕೋ ತಿಳಿಯದು.

ಹಲವು ಸಾರಿ ನಡೆದಿರುವ ಮತ್ತು ನಡೆಯಬಹುದಾದ ಇನ್ನೊಂದು ಬಗೆಯ ಚೋರ ಕೆಲಸ ಉಂಟು. ಅದೇನೆಂದರೆ ದೊಡ್ಡ ಕವಿ ರಚಿಸಿ ಬಿಟ್ಟುಹೋಗಿರುವ ಗ್ರಂಥಕ್ಕೆ ಯಾವುದೋ ದುರಭಿಮಾನದ ಸಲುವಾಗಿ ಮಹದಾಸೆ ಉಳ್ಳವರು ತಾವೇ ರಚಿಸಿದ ತುಣುಕುಗಳನ್ನು ಸೇರಿಸಿಬಿಡುವ ವ್ಯಾಪಾರ. ರಾಮಾಯಣ, ಮಹಾಭಾರತಗಳಿಗೆ ಈ ವಿಧದ ಪ್ರಕ್ಷಿಪ್ತ ಭಾಗ ಎಷ್ಟೊಂದು ಸಂದಿದೆಯೋ ನಿರ್ಣಯಿಸುವುದು ಅಸಾಧ್ಯ. ಶ್ಲೋಕಗಳನ್ನು ತಯಾರಿಸುವುದು ಅಷ್ಟೇನೂ ತ್ರಾಸಕರವಲ್ಲ. ಆದರೆ ವಾಲ್ಮೀಕಿ ವ್ಯಾಸರ ಅಗಾಧ ತೇಜಸ್ಸನ್ನು ಬಲ್ಲವರಿಗೆ ಇಂಥ ಕಳಪೆ ವಾಕ್ಯಗಳನ್ನು ಕಂಡುಹಿಡಿಯುವುದು ಅಷ್ಟೇನು ಕಷ್ಟವಲ್ಲ. ಕುಮಾರವ್ಯಾಸನ ಭಾರತಕ್ಕೂ ಪುರಂದರದಾಸರ ಕೀರ್ತನೆಗಳಿಗೂ ಯಾರು ಯಾರು ಎಷ್ಟು ಎಷ್ಟು ಕೂಡಿಸಿದ್ದಾರೊ ತಿಳಿಯದು. ಈ ಬಗೆಯ ಕಳ್ಳತನಕ್ಕೆ ಅತ್ಯುತ್ಕಟ ಧರ್ಮಶ್ರದ್ಧೆ, ಮೌಢ್ಯ, ತಮ್ಮ ಗುಂಪೆಂಬ ವಿಪರೀತ ಮಮತೆಗಳು ಕಾರಣವಾಗುತ್ತವೆ.

ವಿದ್ವಾಂಸರು ನಿಷ್ಪಕ್ಷಪಾತವಾಗಿ ತಾರತಮ್ಯ ವಿವೇಚನೆಯಿಂದ ಸಾಹಿತ್ಯವನ್ನು ಪರೀಕ್ಷಿಸಬೇಕು, ಪರಿಶೀಲಿಸಬೇಕು. ಕೆಲವು ವಿದ್ವಾಂಸರಿಂದ ಅನೃತವೆನಿಸಿಕೊಳ್ಳುವ ಕೃತ್ಯ ಜರುಗಿದೆಯೆಂದರೆ ಆಶ್ಚರ್ಯವಲ್ಲವೇ. ಒಬ್ಬ ಸಾಹಿತಿಯ ಸಂಬಂಧವಾದ ಪತ್ರಗಳೋ ದಾಖಲೆಗಳೋ ಕೆಲವು ಸಮಸ್ಯೆ ಬಿಡಿಸುವುದಕ್ಕೆ ಅವಶ್ಯಕವಾಗಿರುವ ಸಂದರ್ಭದಲ್ಲಿ ಎಲ್ಲೊ ಒಂದು ಕಡೆ ಸಿಕ್ಕಿತೆಂದು ಹೇಳುತ್ತ ಸುಳ್ಳಾದುವನ್ನು ಸೃಷ್ಟಿಸುತ್ತ ಗುಲ್ಲೆಬ್ಬಿಸುವ ವ್ಯಾಪಾರ ನಡೆದಿದೆ. ಅಂಥ ಕೃತ್ಯ ಪತ್ತೆಯಾಗಿದೆ. ಸುಮಾರು ಕ್ರಿ.ಪೂ. 570 ರಿಂದ 555ರ ವರೆವಿಗೂ ಸಿಸಿಲಿಯ ನಿರಂಕುಶ ದೊರೆಯಾಗಿದ್ದ ಫ್ಯಾಲರಿಸ್ ಪ್ರಖ್ಯಾತ ಪ್ರಭು. ಇದ್ದಕ್ಕಿದ್ದಂತೆ 18ನೆಯ ಶತಮಾನದಲ್ಲಿ ಫ್ಯಾಲರಿಸನ ಕುಶಲ ಪತ್ರಗಳು ಎಂಬ ಸಂಕಲನ ಪ್ರಕಟಗೊಂಡಿತು. ಓದಿದ ಹಲವರು ಅದನ್ನು ಮೆಚ್ಚಿದರು. ಆದರೆ ಗ್ರೀಕ್ ಭಾಷೆಯನ್ನು, ಅದರ ಚರಿತ್ರೆಯನ್ನು ತನ್ನ ಅಂಗೈಯಲ್ಲಿ ಇಟ್ಟುಕೊಂಡಿದ್ದ ಪಂಡಿತವರೇಣ್ಯ ಬೆಂಟ್ಲೆ ಆ ಗ್ರಂಥ ಶುದ್ಧ ಮೋಸವೆಂದು ಸುಲಭವಾಗಿ ಕಂಡುಹಿಡಿದು. ಕಳ್ಳತನವನ್ನು ಎತ್ತಿತೋರಿಸಿದ. ಇಂಥ ವಂಚನೆಗೆ ಪ್ರತಿಷ್ಠೆ ಹೆಚ್ಚಿಸಿಕೊಳ್ಳಬೇಕೆಂಬ ಚಾಪಲ್ಯವೇ ಮುಖ್ಯ ಕಾರಣ.

ಇವಕ್ಕಿಂತ ಹೆಚ್ಚು ಖಂಡನೀಯವಾದ ಬೇರೊಂದು ಸಾರಸ್ವತ ಪ್ರಕರಣ ಹಲವುಬಾರಿ ಆಗಿದೆ. ತಾನೇ ಒಂದು ಕಾವ್ಯ ರಚಿಸಿ ಅದು ತನಗೆ ಯಾವುದೋ ಹಳೆಯ ಪೆಟ್ಟಿಗೆಯಲ್ಲಿ ಸಿಕ್ಕಿತೆಂದೂ ಅದರ ಕರ್ತೃ ಹಿಂದಣ ಕಾಲದ ಒಬ್ಬ ಕವಿಯೆಂದೂ ಪ್ರಕಟಿಸಿದವರುಂಟು. ಯುವಕ ಚ್ಯಾಟರ್‍ಟನ್ ತನಗೆ ಮಧ್ಯಯುಗದ ಥಾಮಸ್ ರೌಲಿ ಎಂಬಾತನಿಂದ ರಚಿತವಾದ ಕಾವ್ಯದ ಪ್ರತಿ ಒಂದು ಚರ್ಚಿನ ಮೂಲೆಯಲ್ಲಿ ದೊರಕಿತೆಂದು ಹೇಳಿದ. ಆದರೆ ಮಧ್ಯಯುಗದ ಇಂಗ್ಲಿಷ್ ಭಾಷೆಯ ಪರಿಚಯ ಅವನಿಗೆ ಚೆನ್ನಾಗಿ ಇರಲಿಲ್ಲವಾಗಿ ಕೃತ್ರಿಮ ಬಯಲಾಯಿತು. ಹಾಗೆಯೇ ಮೆಕ್‍ಫರ್ಸನ್ ಎಂಬಾತ ಲಯಬದ್ಧವಾದ ಗದ್ಯದಲ್ಲೊಂದು ಕಾವ್ಯವನ್ನು ಬರೆದು ಅದರ ಕರ್ತೃ ಪ್ರಾಚೀನನಾದ ಆಸಿಯಸ್ ಎಂದು ಘೋಷಿಸಿದ. ಅದು ಜರ್ಮನಿಯ ಮಹಾಕವಿಗಳನ್ನೂ ಇತರರನ್ನೂ ಬೆರಗುಗೊಳಿಸಿತು. ಆದರೆ ಇಂಗ್ಲೆಂಡಿನಲ್ಲಿ ಡಾ.ಜಾನ್‍ಸನ್ ಮೊದಲಾದವರಿಗೆ ಅದರ ಕೃತಕತೆ ವೇದ್ಯವಾಯಿತು.
ಇವು ಕಪ್ಪು ಸುಳ್ಳಾದರೆ ಇನ್ನೊಂದು ಬಗೆಯ ಬಿಳಿ ಸುಳ್ಳು ಇದೆ. ಕೆಲವು ಗ್ರಂಥಕರ್ತರು ನಾಚಿಕೆಯಿಂದಲೋ ಅಧೈರ್ಯದಿಂದಲೋ ತಮ್ಮ ಕೃತಿಗೆ ಕಲ್ಪಿತವಾದ ಕವಿನಾಮವನ್ನು ಜೋಡಿಸಿ ಮುದ್ರಿಸಿದರು. ಈ ಕೆಲಸ ಬಹುವಾಗಿ ಮಹಿಳೆಯರಿಂದ ಆದದ್ದು. ಮೇರಿ ಎವನ್ಸ್ ಎಂಬಾಕೆ ತನ್ನ ಕಾದಂಬರಿಗಳನ್ನು ಜಾರ್ಜ್ ಎಲಿಯಟ್ ಎಂದು ಕಲ್ಪಿತ ಗಂಡಸಿನ ಹೆಸರಿನಲ್ಲಿ ಪ್ರಕಟಿಸಿದಳು. ಆ ಹೆಸರೇ ಇಂದಿಗೂ ಸ್ಥಿರವಾಗಿಬಿಟ್ಟಿದೆ.

ಈ ಪ್ರಸ್ತಾಪದಲ್ಲಿ ಯಥಾರ್ಥವಾಗಿ ಕಳ್ಳಸಾಹಿತ್ಯವಲ್ಲದಿದ್ದರೂ ಕಳ್ಳಸಾಹಿತ್ಯವೆಂಬ ಅಭಿಶಾಪಕ್ಕೆ ಪಕ್ಕಾಗಬಹುದಾದ ಲೇಖನಗಳ ಬಗ್ಗೆ ಕೆಲವು ಮಾತುಗಳನ್ನು ಆಡಬೇಕು. ಅವಕ್ಕೆ ಕೊಟ್ಟಿರುವ ಹೆಸರು ಪ್ರೇತಬರಹ (ಘೋಸ್ಟ್ ರೈಟಿಂಗ್), ಕವಿಯೊಬ್ಬ ಬೇರೆಯವನ ಕೈಯಲ್ಲಿ ಬರೆಯಿಸಿ ಅದನ್ನು ತನ್ನ ನಾಮಧೇಯದೊಡನೆ ಬೆರೆಸಿ ಪ್ರಕಟಿಸುವುದು ಪ್ರೇತಬರೆಹ. ಸಾಧಾರಣವಾಗಿ ಕವಿ ಹೀಗೆ ಮಾಡುವುದು ಪ್ರಬಲವಾದ ಒಂದು ಕಾರಣದಿಂದ. ತನ್ನ ಕೃತಿಗಳಿಗೆ ಜನರಿಂದ ಹೆಚ್ಚಿನ ಬೇಡಿಕೆ ಇದ್ದು ಸಕಾಲಕ್ಕೆ ಹೊಸ ಕೃತಿಗಳನ್ನು ಒದಗಿಸುವುದು ಶಕ್ತಿ ಸಾಮಥ್ರ್ಯ, ಕಾಲಾವಕಾಶ, ಪ್ರತಿಭೆ ಇಲ್ಲದಿರುವಾಗ ಲೇಖಕ ಇತರರಿಗೆ ಹಣ ಕೊಟ್ಟು ಕತೆ ಕಾದಂಬರಿಗಳನ್ನು ಬರೆಸಿ ತನ್ನ ಹೆಸರಿನಲ್ಲಿ ಪ್ರಚುರ ಮಾಡುತ್ತಾನೆ. ಇಂಥ ವ್ಯವಹಾರ ಗ್ರಂಥಚೌರ್ಯವಲ್ಲ, ಗ್ರಂಥವನ್ನು ಬಾಡಿಗೆಗೆ ತೆಗೆದುಕೊಳ್ಳುವಿಕೆ ಎಂದು ಭಾವಿಸಲಾಗಿದೆ. ಈಚೆಗೆ ಸಾಹಿತಿಗಿಂತಲೂ ಹೆಚ್ಚಾಗಿ ರಾಜಕಾರಣಿಗಳು ಮತ್ತು ಇತರ ಶ್ರೀಮಂತರು ತಮ್ಮ ಆತ್ಮಚರಿತ್ರೆಯನ್ನು ಪ್ರಕಟಿಸಬೇಕೆನಿಸಿದಾಗ, ಅಥವಾ ತಮ್ಮ ಯಾವುದೋ ಒಂದು ಧೋರಣೆಯನ್ನು ಗ್ರಂಥರೂಪದಲ್ಲಿ ಪ್ರಸಾರ ಮಾಡಬೇಕೆನಿಸಿದಾಗ ಪ್ರೇತಲೇಖಕರ ಸಹಾಯವನ್ನು ಕೋರುವ ವ್ಯಾಪಾರ ಹೆಚ್ಚಾಗಿದೆ.    
 				   (ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ